ಬಾಂಬಿಲೈಯಿಡೀ -		
ಡಿಪ್ಟರ ಗಣಕ್ಕೆ ಸೇರಿದ ಕೀಟ ಕುಟುಂಬ. ಇದಕ್ಕೆ ಸೇರಿದ ಕೀಟಗಳು ಹೆಚ್ಚು ಕಡಿಮೆ ಜೇನು ಹುಳುಗಳನ್ನು ಹೋಲುತ್ತವಾದ್ದರಿಂದ ಇವಕ್ಕೆ ಜೇನುದುಂಬಿ ನೊಣ (ಬಿಫ್ಲೈಸ್) ಎಂಬ ಹೆಸರು ಕೊಡಲಾಗಿದೆ. ಮಧ್ಯಮ ಗಾತ್ರದ ನೊಣಗಳಿವು. ಇವುಗಳ ಮೈಮೇಲ ದಟ್ಟವಾದ ನಯ ಕೂದಲು ಉಂಟು. ಬಣ್ಣ ಲೋಹ ಹಸುರು, ಬೆಳ್ಳಿ ಇತ್ಯಾದಿ ವೈವಿಧ್ಯಮಯ, ಕೆಲವಲ್ಲಿ ಮೈಬಣ್ಣ ಹೊಳೆಯುವಂತಿದ್ದರೆ ಇನ್ನು ಕೆಲವಲ್ಲಿ ಮಾಸಲು ಮತ್ತೆ ಕೆಲವು ಹಂಡಬಂಡ. ಆಂಟೆನ ಸರಳ ರೀತಿಯದು; ಮೂರು ಖಂಡಗಳನ್ನು ಒಳಗೊಂಡಿದೆ. ಕಾಲುಗಳು ಉದ್ದ ಹಾಗೂ ತೆಳ್ಳಗಿವೆ. ಕಣ್ಣುಗಳು ಸಾಮಾನ್ಯವಾಗಿ ದೊಡ್ಡವು. ಗಂಡುನೊಣಗಳು ಬಲುದೊಡ್ಡವು. ನೊಣಗಳು ಸಾಮಾನ್ಯವಾಗಿ ಹೂಗಳ ಬಳಿ ಸುಳಿದಾಡುತ್ತವೆ. ಹಾರುವಾಗ ಗಾಳಿಯಲ್ಲಿ ರೆಕ್ಕೆ ಬಡಿಯುತ್ತ ಮುಂದಕ್ಕೆ ಸಾಗದೆ ನಿಲ್ಲಬಲ್ಲವು. ಹೂಗಳ ಮಕರಂದ ಇವುಗಳ ಮೆಚ್ಚಿನ ಆಹಾರ.

ಈ ನೊಣಗಳ ಮರಿಗಳು ಜೇನು, ಕಣಜ, ಮಿಡತೆಗಳ ಮೊಟ್ಟೆ ಮುಂತಾದವುಗಳ ಮೇಲೆ ಪರೋಪಜೀವಿಗಳಾಗಿ ಬದುಕಿರುವುವು. ಮರಿಗಳ ಬೆಳವಣಿಗೆಯಲ್ಲಿ ಅತಿ ರೂಪಾಂತರ (ಹೈಪರ್‍ಮೆಟಮಾರ್ಫಸಿಸ್) ಕಂಡುಬರುತ್ತದೆ. 									           (ಜಿ.ಪಿ.ಸಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ